PF :ಕೇಂದ್ರ ಸರ್ಕಾರವು ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿಯೊಂದನ್ನ ನೀಡಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಜಾರಿಗೊಳಿಸಿರುವ ನೌಕರರ ಠೇವಣಿ ಸಂಬಂಧಿತ ವಿಮಾ ಯೋಜನೆ (EDLI) ಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಲಕ್ಷಾಂತರ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ಹೊಸ ನಿಯಮಗಳ ಪ್ರಕಾರ, ಉದ್ಯೋಗಿ ಮರಣ ಹೊಂದಿದಾಗ, ಅವರ ಪಿಎಫ್ ಖಾತೆಯಲ್ಲಿ ನಿರ್ದಿಷ್ಟ ಮೊತ್ತ ಇಲ್ಲದಿದ್ದರೂ ಸಹಾ ಅವನ ಕುಟುಂಬಕ್ಕೆ ಕನಿಷ್ಠ 50,000 ರೂಪಾಯಿಗಳ ವಿಮಾ ಮೊತ್ತ ಸಿಗಲಿದೆ ಎನ್ನಲಾಗಿದೆ. ಈ ಹಿಂದೆ ಪಿಎಫ್ ಖಾತೆಯಲ್ಲಿ ಕನಿಷ್ಠ ಮೊತ್ತ ಇರಬೇಕು ಎಂಬುದಾಗಿ ಇದ್ದ ಷರತ್ತನ್ನು ಈಗ ತೆಗೆದುಹಾಕಲಾಗಿದೆ.
ಈ ಹೊಸ ಬದಲಾವಣೆಯು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮತ್ತು ಕಡಿಮೆ ವೇತನ ಪಡೆಯುವಂತಹ ಬಹಳಷ್ಟು ಜನ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ. ಸೇವೆಯಲ್ಲಿರುವಾಗ ಉದ್ಯೋಗಿ ನಿಧನರಾದರೆ, ಅವರ ಕುಟುಂಬಕ್ಕೆ ಈ ವಿಮಾ ಯೋಜನೆಯಿಂದ ತಕ್ಷಣದ ಆರ್ಥಿಕ ನೆರವು ಸಿಗುತ್ತದೆ.
ಇಡಿಎಲ್‌ಐ (EDLI) ಯೋಜನೆಯಿಂದ ಆಗಲಿರುವ ಪ್ರಮುಖ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಈ ವಿಮೆಯ ವಿಶೇಷತೆ ಏನೆಂದರೆ, ಉದ್ಯೋಗಿಗಳು ಯಾವುದೇ ಪ್ರೀಮಿಯಂ ಹಣವನ್ನು ಪಾವತಿ ಮಾಡಬೇಕಾಗಿಲ್ಲ. ಉದ್ಯೋಗಿಯ ಪರವಾಗಿ ಸಂಸ್ಥೆಯೇ ಈ ವೆಚ್ಚವನ್ನು ಭರಿಸುತ್ತದೆ. ಅಲ್ಲದೇ ಉದ್ಯೋಗ ಬದಲಾಯಿಸಿದಾಗಲೂ ಈ ಯೋಜನೆಯ ಲಾಭ ಸಿಗುತ್ತದೆ. 60 ದಿನಗಳ ಒಳಗಿನ ಉದ್ಯೋಗ ಬದಲಾವಣೆಯಿಂದ ವಿಮಾ ಹಕ್ಕು ನಷ್ಟವಾಗುವುದಿಲ್ಲ.

ನಾಮಿನಿ ಇಲ್ಲದೇ ಹೋದರೂ ಚಿಂತಿಸುವ ಅಗತ್ಯವಿಲ್ಲ, ಪಿಎಫ್ ಖಾತೆಯಲ್ಲಿ ನಾಮಿನಿಯನ್ನು ನಮೂದಿಸದೇ ಇದ್ದರೂ ಆತಂಕ ಪಡಬೇಕಾದ ಅವಶ್ಯಕತೆ ಖಂಡಿತ ಇಲ್ಲ. ಅಂತಹ ಸಂದರ್ಭಗಳಲ್ಲಿ, ಮೃತರಿಗೆ ಯಾರು ಕಾನೂನುಬದ್ಧ ಉತ್ತರಾಧಿಕಾರಿ ಆಗಿರುತ್ತಾರೋ ಎಲ್ಲಾ ಹಣವನ್ನು ಅವರಿಗೇ ವರ್ಗಾಯಿಸಲಾಗುತ್ತದೆ. ಆದರೆ, ಇದಕ್ಕೆ ಅಗತ್ಯ ದಾಖಲೆಗಳು ಮತ್ತು ಗುರುತಿನ ಪುರಾವೆಗಳನ್ನು ಸಲ್ಲಿಸಬೇಕಾಗಿರುವುದು ಕಡ್ಟಾಯವಾಗಿದೆ.
ಈ ಬದಲಾವಣೆಗಳು ಲಕ್ಷಾಂತರ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಆರ್ಥಿಕವಾಗಿ ಭದ್ರತೆಯನ್ನು ಒದಗಿಸುತ್ತವೆ.